ಜಾಗ್ರತ್ -
ಎಚ್ಚರಿಕೆಯಲ್ಲಿರುವ ಸ್ಥಿತಿ. ಇದರ ಸ್ವರೂಪವನ್ನು ತಿಳಿಯಬೇಕಾದರೆ ಇದನ್ನು ಸ್ವಪ್ನ ಮತ್ತು ಸ್ವಪ್ನವಿಲ್ಲದ ಗಾಢ ನಿದ್ರೆಯೊಡನೆ ಹೋಲಿಸಬೇಕು. ಜಾಗ್ರದವಸ್ಥೆಯಲ್ಲಿ ಇರುವ ಅಂಶಗಳಲ್ಲಿ ಮುಖ್ಯವಾದವು ಇವು. ಇಲ್ಲಿ ಅನುಭವವನ್ನು ಪಡೆಯುವ ಸಚೇತನವಾದ ಒಂದು ವ್ಯಕ್ತಿ ಇರುತ್ತಾನೆ. ಈತ ಕ್ರಿಯಾತ್ಮಕವಾದ ಆಲೋಚನೆ, ಭಾವನೆ, ಸುಖದುಃಖಾನುಭವ ಪ್ರಯತ್ನ ಇವುಗಳಿಗೆ ಆಶ್ರಯನಾಗಿದ್ದಾನಲ್ಲದೆ ಇಂದ್ರಿಯ ದ್ವಾರಾ ಬಾಹ್ಯ ಪ್ರಪಂಚದೊಡನೆ ವ್ಯವಹರಿಸುತ್ತಾನೆ; ಅದರ ವಿಷಯಗಳನ್ನು ಗ್ರಹಿಸುವುದಲ್ಲದೆ, ಅದರ ಮೇಲೆ ತನ್ನ ಕ್ರಿಯಾತ್ಮಕ ಪರಿಣಾಮವನ್ನು ಉಂಟು ಮಾಡುತ್ತಾನೆ. ಇದು ಸಮಗ್ರ ಜಾಗ್ರತ್ ಸ್ವರೂಪ. ಸ್ವಪ್ನದಲ್ಲಾದರೋ ವ್ಯಕ್ತಿ ಆಂತರಿಕ ಕಲ್ಪಿತ ಪ್ರಪಂಚದಲ್ಲಿ ಇಂದ್ರಿಯ ಸಹಾಯವಿಲ್ಲದೆ ಕೇವಲ ಮನಸ್ಸಿನ ನಿರ್ಮಾಣ ಸಾಮಥ್ರ್ಯದ ಮೂಲಕ ವ್ಯವಹರಿಸುತ್ತಾನೆ. ಸುಷುಪ್ತಿಯಲ್ಲಿ ಮನಸ್ಸೂ ಉಪಶಾಂತವಾಗಿ ಕೇವಲ ಚೈತನ್ಯ ಶಕ್ತಿ ಮಾತ್ರ ತನ್ನಲ್ಲಿಯೇ ಅಡಗಿರುತ್ತದೆ. ಸಾರ್ವಜನೀಯವಾದ ಬಾಹ್ಯ ಪ್ರಪಂಚದೊಡನೆ ಇಂದ್ರಿಯ ದ್ವಾರ ನಾನಾ ಮತ್ತು ಕ್ರಿಯಾತ್ಮಕವಾದ ವ್ಯಾಪಾರವನ್ನು ನಡೆಸುವುದೇ ಜಾಗ್ರತ್ತಿನ ಅಸಾಧಾರಣ ಲಕ್ಷಣ.								(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ